ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥ್ಹುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು.